ಸಾಣಿಕಟ್ಟೆಯ ಉಪ್ಪಿನಾಗರ

ಸಾಂಪ್ರದಾಯಿಕಉಪ್ಪಿನತಯಾರಿಕೆ #ವರ್ಷ302 #ಐತಿಹಾಸಿಕಹಿನ್ನಲೆ
#ಉತ್ತರಕನ್ನಡಜಿಲ್ಲೆಯಹೆಮ್ಮೆ
ಉತ್ತರ ಕನ್ನಡ ಜಿಲ್ಲೆಯ ಕೆಂಪುಪ್ಪಿನ ಆಗರ
 ಸಾಣಿಕಟ್ಟಾ (ಕುಮಟಾ), ಹಡವ(ಅಂಕೋಲ) ಮತ್ತು ಶಿಂಗನಮಕ್ಕಿ (ಅಂಕೋಲ)..

ಗೋಕರ್ಣಕ್ಕೆ ಹೋಗುವ ಪ್ರವಾಸಿಗರಿಗೆ ,ಇನ್ನೇನು ಗೋಕರ್ಣ ಮುಟ್ಟ ಬೇಕೆನಿಸುವಷ್ಟರಲ್ಲಿ ,ರಾಷ್ಟ್ರೀಯ ಹೆದ್ದಾರಿಯಿಂದ ಹೊರಳಿ, ಗೋಕರ್ಣದತ್ತ ಸಾಗುವಾಗ ಎಡಬಲದಲ್ಲಿ ಕಾಣಸಿಗುವ ಎಕರೆಗಟ್ಟಲೇ ಗಜನಿ ಭೂಮಿಯ ಮೇಲೆ ಹಿಮದ ರಾಶಿಯಂತೆ ಅಲ್ಲಲ್ಲಿ ಚೆಲ್ಲಿ ಬಿದ್ದಿರುವ ಪುಟ್ಟ ಪುಟ್ಟ ಬಿಳಿಯ ಗುಪ್ಪೆಗಳು ಇದಿರುಗೂಂಡು ಸ್ವಾಗತಿಸುವದೇ ನಮ್ಮ "ಸಾಣಿಕಟ್ಟೆಯ ಉಪ್ಪಿನಾಗರ "
----------‐-------------------------------------------------
ಇದು ಗೋಕರ್ಣದ ನೆಲದ ಮತ್ತೊಂದು ವಿಶೇಷ ಹಾಗೂ ಇಲ್ಲಿನ ಜನರು ಕಷ್ಟಪಟ್ಟು ಸುರಿಸಿದ ಬೆವರಿನ ಫಸಲು.
ಗೋಕರ್ಣಕ್ಕೆ ಹೊಂದಿಕೊಂಡಂತೆ ಇರುವ ಸಾಣಿಕಟ್ಟಾ, ಕರ್ನಾಟಕದ ಅತ್ಯಂತ ಹಳೆಯ ಮತ್ತು ದೊಡ್ಡ ಉಪ್ಪಿನ ಕಾರ್ಖಾನೆ . 

1720ರಿಂದ ನಿರಂತರವಾಗಿ ಬೇಸಿಗೆಕಾಲದಲ್ಲಿ ಉಪ್ಪನ್ನು ತಯಾರಿಸುತ್ತಿರುವ ಈ ಪ್ರದೇಶ ಸರಿಸುಮಾರು 302 ವರ್ಷಗಳ ಇತಿಹಾಸವುಳ್ಳ ಉತ್ತರ ಕನ್ನಡಗರ ಹೆಮ್ಮೆಯ ಸ್ಥಳ.

ಸಂಪೂರ್ಣವಾಗಿ ನೈಸರ್ಗಿಕ ಪದ್ಧತಿಯಲ್ಲಿ ಸೂರ್ಯನ ಶಾಖವನ್ನು ಬಳಸಿ ತಯಾರಿಸಲಾಗುವ ಈ ಉಪ್ಪಿನ ತಯಾರಿಕೆಗೆ ತಗಲುವ ಸಮಯ ಸರಿಸುಮಾರು ಮೂರು ತಿಂಗಳು. 

ಹೆಚ್ಚಿನ ಉಪ್ಪಿನಾಂಶವನ್ನು ಹೊಂದಿರುವ ಅಘನಾಶಿನಿ ನದಿ– ಅರಬ್ಬೀ ಸಾಗರ ಸಂಗಮದ ಭಾಗದ ನೀರನ್ನು ಇಲ್ಲಿನ ಬಯಲು ಪ್ರದೇಶದಲ್ಲಿ ಕಟ್ಟೆ ಕಟ್ಟಿ ಸಂಗ್ರಹಿಸಿ ಸಂಸ್ಕರಿಸಿ, ಆಗಾಗ ದ್ರಾವಣದ ವಾಹಕತೆಯನ್ನು ಗಮನಿಸುತ್ತಾ, ಆ ಬಿರು ಬಿಸಿಲಲ್ಲಿ ನಿಂತು ಉಪ್ಪನ್ನು ತಯಾರಿಸಲು ಬೇಕಾಗುವ ಸಂಯಮ, ಕೌಶಲವನ್ನು ಮೈಗೂಡಿಸಿಕೊಂಡಿರುವ ಸ್ಥಳೀಯರಿಗೆ ಅದೊಂದು ದೈವದತ್ತ ಕಲೆ. 

ಐತಿಹಾಸಿಕ ಹಿನ್ನೆಲೆಯ ಮಹತ್ವ ಸಾರುವ "ಸಾಣಿಕಟ್ಟೆಯ ಉಪ್ಪಿನಾಗರ" , ಮೂರು ಶತಮಾನಗಳ ಹಿಂದೆ ಇಲ್ಲಿ ಉಪ್ಪಿನ ತಯಾರಿಕೆ ಆರಂಭಗೊಂಡಾಗ ಆ ಪ್ರದೇಶ 50 ಎಕರೆಗಳಿಗಷ್ಟೆ ಸೀಮಿತವಾಗಿತ್ತು.
 ಆಗ ಅದು ಬೈಂದೂರು ಅರಸರ ಆಳ್ವಿಕೆಗೊಳಪಟ್ಟಿದ್ದ ಪ್ರದೇಶವಾಗಿತ್ತು. ಕಾಲಕ್ರಮೇಣ ಆ ಪ್ರದೇಶವನ್ನು ಹೈದರಾಲಿ ಆಕ್ರಮಿಸಿಕೊಂಡ. ತದನಂತರ, ಟಿಪ್ಪು ಸುಲ್ತಾನನ ಕಾಲದಲ್ಲಿ ಇಲ್ಲಿ ಉತ್ಪಾದಿಸಲಾದ ಉಪ್ಪನ್ನು ಮೈಸೂರಿಗೆ ಸಾಗಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಅಲ್ಲಿಯವರೆಗೆ ತೆರಿಗೆಯ ವ್ಯಾಪ್ತಿಯಿಂದ ಹೊರಗಿದ್ದ ಉಪ್ಪಿಗೆ ಟಿಪ್ಪು ಸುಲ್ತಾನ ಮೊದಲ ಬಾರಿಗೆ ತೆರಿಗೆ ವಿಧಿಸಿದ.ಟಿಪ್ಪು ಸುಲ್ತಾನನ ಆಳ್ವಿಕೆ ಕೊನೆಗೊಂಡ ನಂತರ ಈ ಭಾಗವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು. 

ಸ್ವಾತಂತ್ರ್ಯ ಸಂಗ್ರಾಮದಲ್ಲಂತೂ ಈ ಪ್ರದೇಶ ತನ್ನದೇ ಆದ ಛಾಪನ್ನು ಮೂಡಿಸಿ ಈ ಪ್ರದೇಶದಲ್ಲಿ "ಉಪ್ಪಿನ ಸತ್ಯಾಗ್ರಹ " ವನ್ನು ಹಮ್ಮಿಕೊಳ್ಳಲು ಗಾಂಧೀಜಿಯವರಿಂದ ಸ್ಪೂರ್ತಿಪಡೆಯಿತು.ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ ಉಪ್ಪಿನ ಸತ್ಯಾಗ್ರಹವನ್ನು ಆರಂಭಿಸಿದಾಗ, ಈ ಭಾಗದಲ್ಲಿ ಅದಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿತ್ತು.
 ಈ ಕಾರಣದಿಂದಲೇ ಪಕ್ಕದ ಅಂಕೋಲಾ ತಾಲ್ಲೂಕಿಗೆ "ಕರ್ನಾಟಕದ ಬಾರ್ಡೋಲಿ" ಎಂಬ ನಾಮವಿಶೇಷಣವನ್ನು ತಂದುಕೊಟ್ಟಿತು.

  ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿಗೊಂಡ ಸ್ಥಳೀಯ ಯುವಕರು ಈ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಸಾಣೆಕಟ್ಟೆಯ ಸರಕಾರಿ ಉಪ್ಪಿನ ಮಳಿಗೆಗಳ ಮೇಲೆ ಸತ್ಯಾಗ್ರಹಿಗಳು ದಾಳಿ ಮಾಡಿ ಉಪ್ಪನ್ನು ಬೇರೆಡೆಗೆ ಸಾಗಿಸಿ, ಸ್ವತಃ ಉಪ್ಪನ್ನು ತಾವೇ ತಯಾರಿಸಿ ಉಪ್ಪಿನ ಸಂತೆಗಳನ್ನು ನಡೆಸಿದರು. ಇಂದಿಗೂ ಅದು ಹೊಸ ಪೀಳಿಗೆಗೆ ಆ ಕಥೆಯನ್ನು ಸಾರಿ ಹೇಳುತ್ತಿದೆ.

ಆರಂಭದಿಂದಲೂ ಅಲ್ಲಲ್ಲಿ ಚದುರಿಹೋಗಿದ್ದ ಈ ಭಾಗದ 50ಕ್ಕೂ ಹೆಚ್ಚು ವೈಯಕ್ತಿಕವಾಗಿ ಉಪ್ಪನ್ನು ತಯಾರಿಸುತ್ತಿದ್ದ ಉಪ್ಪು ತಯಾರಕರು ,1952ರಲ್ಲಿ "ನಾಗರಬೈಲ ಉಪ್ಪು ತಯಾರಕರ ಸಹಾಯಕ ಸಂಘ"ವನ್ನು ಸ್ಥಾಪಿಸುವ ಮೂಲಕ ಹೊಸ ಇತಿಹಾಸವನ್ನು ಬರೆದರು. 

ಅಂದು ಆರಂಭವಾದ ಸಂಘವು ಕರ್ನಾಟದ ಮೊದಲ ಮತ್ತು ಇಂದಿಗೂ ಏಕೈಕ ಉಪ್ಪು ತಯಾರಕ "ಸ್ವಸಹಾಯ ಸಂಘ"ವಾಗಿದೆ. ತನ್ನ ಬಣ್ಣದಿಂದ ಸ್ಥಳೀಯವಾಗಿ ‘ಕೆಂಪುಪ್ಪು’ ಎಂದು ಕರೆಯಲ್ಪಡುವ ಈ ಹರಳುಪ್ಪಿಗೆ ಇಂದಿನ ಟೇಬಲ್ ಸಾಲ್ಟ್‌ನ ಜಮಾನಾದಲ್ಲೂ ರಾಜ್ಯದ ಹಲವು ಭಾಗದಲ್ಲಿ ಅಗ್ರ ತಾಂಬೂಲ.
ಆಯುಷ್‌ ಪದ್ಧತಿಯಲ್ಲಿ ಸೂರ್ಯಸ್ನಾನ ಸೇರಿದಂತೆ ಕೆಲವು ಚಿಕಿತ್ಸೆಗಳಲ್ಲಿ ಸಾಣಿಕಟ್ಟೆಯ ಕೆಂಪುಪ್ಪು ಬಳಕೆಯಾಗುತ್ತದೆ.ಉಪ್ಪಿನ ತಯಾರಿಕೆಯಲ್ಲಿ ಬಳಸುವುದು ಅಘನಾಶಿನಿ ನದಿಯ ನೀರು. ಇನ್ನೂ ತನ್ನ ಪಾವಿತ್ರತೆಯನ್ನು ಉಳಿಸಿಕೊಂಡಿರುವ ಜಗತ್ತಿನ ಕೆಲವೇ ಕೆಲವು ನದಿಗಳಲ್ಲಿ ಇದೂ ಒಂದು. ಹೆಸರೇ ಹೇಳುವಂತೆ ಅಘನಾಶಿನಿಯು ಪಶ್ಚಿಮಘಟ್ಟಗಳ ಬೆಟ್ಟಗುಡ್ಡಗಳಿಂದ ಹರಿದು ಬರುವಾಗ ತನ್ನ ದಾರಿಗುಂಟ ಅನೇಕ ಔಷಧೀಯ ಸಸ್ಯಗಳ ಪ್ರದೇಶದಿಂದ ಹಾದುಬರುವುದರಿಂದ ರೋಗನಾಶಕ ಗುಣಗಳನ್ನು ಪಡೆದುಕೊಂಡಿದೆ ಎಂಬುದನ್ನು ತಜ್ಞರೇ ಒಪ್ಪುತ್ತಾರೆ. ಆಯುರ್ವೇದದಲ್ಲೂ ಸಾಣಿಕಟ್ಟಾ ಉಪ್ಪು ಬಳಕೆಯಾಗುತ್ತದೆ.
ತನ್ನ ಔಷಧೀಯ ಗುಣಗಳ ಕಾರಣಗಳಿಗಾಗಿ ಇಲ್ಲಿನ ಕೆಂಪುಪ್ಪೇ ಬಳಕೆ ಆಗುವುದರಿಂದ ರಾಜ್ಯದ ಇತರ ಭಾಗಗಳಿಂದಲೂ ತುಂಬಾ ಬೇಡಿಕೆ.

ಇಂದು,ಅಂದಾಜು 450 ಎಕರೆ ಪ್ರದೇಶದಲ್ಲಿ ಚಾಚಿರುವ ಈ ಪ್ರದೇಶದಲ್ಲಿ ವಾರ್ಷಿಕವಾಗಿ ತಯಾರಾಗುವ ಉಪ್ಪಿನ ಪ್ರಮಾಣ ,ಸರಿಸುಮಾರು 10 ಸಾವಿರ ಮೆಟ್ರಿಕ್ ಟನ್‌ಗಳಷ್ಟು.
ಇಲ್ಲಿ ಉತ್ಪಾದನೆಯಾದ ಉಪ್ಪನ್ನು ಉತ್ತರ ಕನ್ನಡ, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗೋವಾ ಭಾಗಗಳಿಗೆ ಸಾಗಟ ಮಾಡಲಾಗುತ್ತದೆ.

ಸಾಣಿಕಟ್ಟೆಯ ಉಪ್ಪಿನಾಗರದಿಂದ ಸ್ಪೂರ್ತಿಪಡೆದ ಹಾಗೂ ಅಲ್ಲಿ ಕೆಲಸಮಾಡುವ ಹಾಲಕ್ಕಿಗರು ಅಂಕೋಲಾ ತಾಲ್ಲೂಕಿನ "ಹಡವ" ಹಾಗೂ" ಶಿಂಗನಮಕ್ಕಿ"ಗ್ರಾಮದಲ್ಲಿಯೂ ಸಹ ಸಣ್ಣ ಪ್ರಮಾಣದ ಉಪ್ಪು ತಯಾರಿಕೆಯ ಘಟಕವನ್ನು ಸ್ಥಾಪಿಸಿದ್ದಾರೆ. ಗಂಗಾವಳಿ-ಅರಬ್ಬೀ ಸಮುದ್ರದ ಸಂಗಮದ ನೀರನ್ನು ಬಳಸಿಕೊಳ್ಳುವ ಮೂಲಕ ಉಪ್ಪನ್ನು ತಯಾರಿಸುತ್ತಾರೆ.
ಉತ್ತರ ಕನ್ನಡ ನಮ್ಮ ಹೆಮ್ಮೆ💙💙🧡💚

Comments

Popular posts from this blog

ನನ್ನ ಅವ್ವ 💕